ಭಾರತದಲ್ಲಿ ಆ್ಯಪಲ್ ಹೂಡಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಡೋನಾಲ್ಡ್ ಟ್ರಂಪ್‌ಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಆ್ಯಪಲ್ ಐಫೋನ್ ಫಾಕ್ಸ್‌ಕಾನ್ ಘಟಕ ಕೆಲವೇ ದಿನದಲ್ಲಿ ಕಾರ್ಯಾರಂಭಿಸುತ್ತಿದೆ. 

ಬೆಂಗಳೂರು(ಮೇ.18) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಆ್ಯಪಲ್ ಸಿಇಒ ಟಿಮ್ ಕುಕ್‌ಗೆ ನೀಡಿದ ಸೂಚನೆ ಭಾರಿ ಚರ್ಚೆಯಾಗಿತ್ತು. ಭಾರತದಲ್ಲಿ ಆ್ಯಪಲ್ ಭಾರಿ ಹೂಡಿಕೆ ಮಾಡುತ್ತಿದೆ. ಇದರಿಂದ ಹಿಂದೆ ಸರಿಯುವುದು ಉತ್ತಮ ಎಂದು ಸೂಚಿಸಿದ್ದರು. ಆದರೆ ಈ ಸೂಚನೆ ಬೆನ್ನಲ್ಲೇ ಟಿಮ್ ಕುಕ್ ಭಾರತದಲ್ಲಿ ಮೊದಲೇ ಘೋಷಿಸಿದ ಹೂಡಿಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿ ಟ್ರಂಪ್‌ಗೆ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಟ್ರಂಪ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಭಾರತದಲ್ಲಿ ಹೂಡಿಕೆ ಬೇಡ ಎಂದ ಟ್ರಂಪ್ ಮಾತಿನ ಬೆನ್ನಲ್ಲೇ ಬೆಂಗಳೂರಿನಲ್ಲಿನ ಹೊಸ ಆ್ಯಪಲ್ ಐಫೋನ್ ಘಟಕ ಕಾರ್ಯಾರಂಭಕ್ಕೆ ಸಜ್ಜಾಗಿದೆ. ಜೂನ್ ತಿಂಗಳಿನಿಂದ ದೇವನಹಳ್ಳಿಯಲ್ಲಿರುವ ಆ್ಯಪಲ್ ಐಫೋನ್ ಫಾಕ್ಸ್‌ಕಾನ್ ಘಟಕ ಕಾರ್ಯಾರಂಭಿಸುತ್ತಿದೆ.  

ಬೆಂಗಳೂರಿನಿಂದ ಅಮೆರಿಕೆಗ ಐಫೋನ್ ರಫ್ತು
ಡೋನಾಲ್ಡ್ ಟ್ರಂಪ್ ಭಾರತದಲ್ಲಿ ಆ್ಯಪಲ್ ಹೂಡಿಕೆಗೆ ವಿರೋಧ ವ್ಯಕ್ತಪಡಿಸಿದ ವಿಚಾರ ಭಾರಿ ಚರ್ಚೆಯಾಗಿತ್ತು. ಭಾರತ ಮಾತ್ರವಲ್ಲ, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇದು ಚರ್ಚೆಯಾಗಿತ್ತು. ಭಾರತದಲ್ಲಿ ಆ್ಯಪಲ್ ಯಾವುದೇ ಹೂಡಿಕೆ ಮಾಡಲ್ಲ ಎಂದು ಹೇಳಲಾಗುತ್ತಿತ್ತು. ಒಪ್ಪಂದ ಪ್ರಕಾರ ಉದ್ಯೋಗ, ಹೂಡಿಕೆ ಎಲ್ಲವೂ ಕನಸಾಗಿ ಉಳಿಯಲಿದೆ ಎಂದು ಭಾರತದಲ್ಲಿ ಆತಂಕ ಎದುರಾಗಿತ್ತು. ಆದರೆ ಟಿಮ್ ಕುಕ್ ಅಷ್ಟೇ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಿದ್ದರು. ಭಾರತದಲ್ಲಿ ಈಗಾಗಲೇ ಘೋಷಿಸಿದ ಹೂಡಿಕೆ ಮುಂದುವರಿಯಲಿದೆ ಎಂದಿದ್ದರು. ಆದರೂ ಆತಂಕ ಹಾಗೇ ಉಳಿದಿತ್ತು. ಇದೀಗ ಹೂಡಿಕೆಯಂತೆ ದೇವನಹಳ್ಳಿಯಲ್ಲಿ ಹೊಸದಾಗಿ ಆರಂಭಿಸಿರುವ ಆ್ಯಪಲ್ ಐಫೋನ್ ಘಟಕ ಜೂನ್ ತಿಂಗಳಿನಿಂದ ಸಂಪೂರ್ಣವಾಗಿ ಕಾರ್ಯಾರಂಭಗೊಳ್ಳಲಿದೆ. ಜೂನ್ ತಿಂಗಳಿನಿಂದ ದೇವನಹಳ್ಳಿಯಲ್ಲಿ ಐಫೋನ್ ಉತ್ಪಾದನೆ ಆರಂಭಗೊಳ್ಳಲಿದೆ.

ವಿಶೇಷ ಅಂದರೆ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಆ್ಯಪಲ್ ಐಫೋನ್ ಹಲವು ದೇಶಗಳಿಗೆ ರಫ್ತಾಗಲಿದೆ. ಈ ಪೈಕಿ ಶೇಕಡಾ 90 ರಷ್ಟು ಫೋನ್ ಅಮೆರಿಕಾಗೆ ರಫ್ತಾಗಲಿದೆ. ಭಾರತದಲ್ಲಿ ಆ್ಯಪಲ್ ಹೂಡಿಕೆ ಬೇಡ ಎಂದ ಟ್ರಂಪ್ ಹಾಗೂ ಅಮೆರಿಕನ್ನರು ಐಫೋನ್ ಬೇಕು ಎಂದರೆ ಬೆಂಗಳೂರಿನಲ್ಲಿ ತಯಾರಾದ ಐಫೋನ್ ಖರೀದಿಸಿಬೇಕಿದೆ.

ಆತಂಕಕ್ಕೆ ತೆರೆ ಎಳೆದ ಸಚಿವ ಎಂಬಿ ಪಾಟೀಲ್ 
ಈ ಕುರಿತು ಕರ್ನಾಟಕ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಈ ಕುರಿತು ಮಾತನಾಡಿದ್ದಾರೆ. ಡೋನಾಲ್ಡ್ ಟ್ರಂಪ್ ಹೇಳಿಕೆಯಿಂದ ಕರ್ನಾಟಕದಲ್ಲಿ ಐಫೋನ್ ಘಟಕದ ಭವಿಷ್ಯ ಏನು ಅನ್ನೋ ಆತಂಕ ಎದುರಾಗಿತ್ತು. ಆದರೆ ಟಿಮ್ ಕುಕ್ ಇದೀಗ ಬೆಂಗಳೂರು ಘಟಕದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಬೆಂಗಳೂರಿನ ದೇವನಹಳ್ಳಿಯ ಐಫೋನ್ ಘಟಕ ಕಾರ್ಯಾರಂಭಿಸುತ್ತಿದೆ. ಉದ್ಘಾಟನೆಗೆ ಸಜ್ಜಾಗಿರುವ ದೇವನಹಳ್ಳಿ ಘಟಕದಿಂದ ಜೂನ್ ತಿಂಗಳಿನಿಂದಲೇ ಐಫೋನ್‌ಗಳು ರಫ್ತಾಗಲಿದೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಜೂನ್ ತಿಂಗಳಿನಿಂದಲೇ ಐಫೋನ್ ರಫ್ತು
ದೇವನಹಳ್ಳಿ ಐಫೋನ್ ಘಟಕ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ವಿಶೇಷ ಅಂದರೆ ಜೂನ್ ತಿಂಗಳಲ್ಲಿ ಐಪೋನ್ ಉತ್ಪಾದನೆ ಆರಂಭಗೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷ ಮಶಿನರಿಗಳನ್ನು ಬಳಸಿಕೊಳ್ಳಲಾಗಿದೆ. ಜೂನ್ ತಿಂಗಳಿನಿಂದಲೇ ಬೆಂಗಳೂರಿನಲ್ಲಿ ತಯಾರಾದ ಐಫೋನ್ ವಿದೇಶಗಳಿಗೆ ಅದರಲ್ಲೂ ಅಮೆರಿಕಗೆ ರಫ್ತಾಗಲಿದೆ. 

ಟ್ರಂಪ್ ಹೇಳಿಕೆಗೆ ಆಕ್ರೋಶ

ಇತ್ತೀಚೆಗೆ ದೋಹಾದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಮಾತಾಡಿದ ಡೋನಾಲ್ಡ್ ಟ್ರಂಪ್, ಭಾರತದಲ್ಲಿ ಆ್ಯಪಲ್ ಹೂಡಿಕೆ ಮಾಡುತ್ತಿದೆ. ಭಾರತ ವಿಶ್ವದಲ್ಲೇ ಅತೀ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರ. ಟಿಮ್ ಕುಕ್ ಭಾರತವನ್ನು ಕಟ್ಟಿ ಬೆಳೆಸಬೇಕು ಎಂದುಕೊಂಡಿದ್ದರೆ ಸರಿ. ಆದರೆ ಅಮೆರಿಕದಲ್ಲಿ ಹೂಡಿಕೆಗೆ ವಿಫುಲ ಅವಕಾಶವಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದರು.