ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತದ 2ನೇ ಶ್ರೀಮಂತ ವ್ಯಕ್ತಿ. ಆದರೆ ಗೌತಮ್ ಅದಾನಿ ಸ್ಯಾಲರಿ ಅಚ್ಚರಿಗೆ ಕಾರಣವಾಗಿದೆ. ಅದಾನಿ ಗ್ರೂಪ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಇಒ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳ ವೇತನಕ್ಕಿಂತ ಗೌತಮ್ ಅದಾನಿ ವೇತನ ಕಡಿಮೆ. ಗೌತಮ್ ಅದಾನಿ ಸ್ಯಾಲರಿ ಎಷ್ಟು?

ಅಹಮ್ಮದಾಬಾದ್(ಜೂ.08) ಭಾರತದ 2ನೇ ಶ್ರೀಮಂತ ವ್ಯಕ್ತಿ, ವಿಶ್ವದ 23ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಇಂಧನ, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ. ಅದಾನಿ ಗ್ರೂಪ್ ಕಂಪನಿಗಳು ಹಲವು ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮವಾಗಿ ಬೆಳೆದು ನಿಂತಿದೆ. ಇದೀಗ ಗೌತಮ್ ಅದಾನಿ ವೇತನ ಬಹಿರಂಗವಾಗಿದೆ. ವಿಶೇಷ ಅಂದರೆ ಗೌತಮ್ ಅದಾನಿ ಸಂಸ್ಥೆಯಲ್ಲಿ ಕೆಲಸ ಮಾಡುವ ಟಾಪ್ ಅಧಿಕಾರಿಗಳ ಸ್ಯಾಲರಿಗಿಂತ ಮಾಲೀಕ ಗೌತಮ್ ಅದಾನಿ ಸ್ಯಾಲರಿ ಕಡಿಮೆ. ಅದಾನಿಗಿಂತ 6 ರಿಂದ 7 ಪಟ್ಟು ಹೆಚ್ಚು ವೇತನವನ್ನು ಅದಾನಿ ಸಂಸ್ಥೆಯಲ್ಲಿ ಕೆಲಸ ಮಾಡುವ ಟಾಪ್ ಅಧಿಕಾರಿಗಳು ಪಡೆಯುತ್ತಿದ್ದಾರೆ.

ಗೌತಮ್ ಅದಾನಿ ವೇತನ

ಗೌತಮ್ ಅದಾನಿ ಒಟ್ಟು ಆಸ್ತಿ ಮೌಲ್ಯ 67.1 ಬಿಲಿಯನ್ ಅಮೆರಿಕನ್ ಡಾಲರ್. 2024-25ರ ಸಾಲಿನಲ್ಲಿ ಗೌತಮ್ ಅದಾನಿ ವಾರ್ಷಿಕ ಸ್ಯಾಲರಿಯಾಗಿ 10.41 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. 2023-24ರ ಸಾಲಿಗೆ ಹೋಲಿಸಿದರೆ ಅದಾನಿ ಶೇಕಡಾ 12ರಷ್ಟು ಸ್ಯಾಲರಿಯಲ್ಲಿ ಹೆಚ್ಚಳವಾಗಿದೆ. 2023-24ರ ಸಾಲಿನಲ್ಲಿ 9.26 ಕೋಟಿ ರೂಪಾಯಿ ಮೊತ್ತವನ್ನು ಗೌತಮ್ ಅದಾನಿ ವೇತನವಾಗಿ ಪಡೆದಿದ್ದರು.

ಅದಾನಿ ಗ್ರೂಪ್ ಕಂಪನಿಗಳ ಪೈಕಿ 9 ಲಿಸ್ಟೆಡ್ ಕಂಪನಿಗಳಿವೆ. ಈ ಪೈಕಿ ಕೇವಲ 2 ಕಂಪನಿಗಳಿಂದ ಮಾತ್ರ ಅದಾನಿ ಸ್ಯಾಲರಿ ಪಡೆಯುತ್ತಿದ್ದಾರೆ.ಅದಾನಿ ಎಂಟ್ರಪ್ರೈಸರ್ ಲಿಮಿಟೆಡ್ (AEL) ನಿಂದ 2024-25ರ ಸಾಲಿನಲ್ಲಿ ಒಟ್ಟು 2.54 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. ಇದರಲ್ಲಿ 2.26 ಕೋಟಿ ರೂಪಾಯಿ ಸ್ಯಾಲರಿ ಹಾಗೂ 28 ಲಕ್ಷ ರೂಪಾಯಿ ಭತ್ಯೆ. ಇನ್ನು ಅದಾನಿ ಪೋರ್ಟ್ ಹಾಗೂ ಸ್ಪೆಷಲ್ ಎಕಾನಾಮಿಕ್ ಝೋನ್ ಕಂಪನಿಯಿಂದ ಅದಾನಿ 2024-25ರ ಸಾಲಿನಲ್ಲಿ ಒಟ್ಟು 7.87 ಕೋಟಿ ರೂಪಾಯಿ ವಾರ್ಷಿಕ ಸ್ಯಾಲರಿ ಪಡೆದಿದ್ದಾರೆ. ಇದರಲ್ಲಿ 1.8 ಕೋಟಿ ರೂಪಾಯಿ ಸ್ಯಾಲರಿ ಹಾಗೂ 6.07 ಕೋಟಿ ರೂಪಾಯಿ ಕಮಿಷನ್ ರೂಪದಲ್ಲಿ ಪಡೆದಿದ್ದಾರೆ.

ಅದಾನಿ ಗ್ರೂಪ್ ಕಂಪನಿಯ ಟಾಪ್ ಅಧಿಕಾರಿಗಳ ಸ್ಯಾಲರಿ ಮಾಲೀಕನಿಗಿಂತ ಅಧಿಕ

ಗೌತಮ್ ಅದಾನಿ ವಾರ್ಷಿಕ ಸ್ಯಾಲರಿ 10.41 ಕೋಟಿ ರೂಪಾಯಿ. ಆದರೆ ಅದಾನಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಿಇಒ ಸೇರಿದಂತೆ ಹಿರಿಯ ಹಾಗೂ ಟಾಪ್ ಮ್ಯಾನೇಜರ್ ಸ್ಯಾಲರಿ ಗೌತಮ್ ಅದಾನಿಗಿಂತ ಹೆಚ್ಚು. ಅದಾನಿ ಎಂಟ್ರಪ್ರೈಸಸ್ ಲಿಮಿಟೆಡ್ ಕಂಪನಿಯ ಸಿಇಒ ವಿನಯ್ ಪ್ರಕಾಶ್ ಅವರ 2024-25ರ ಸಾಲಿನ ವಾರ್ಷಿಕ ಸ್ಯಾಲರಿ ಬರೋಬ್ಬರಿ 69.34 ಕೋಟಿ ರೂಪಾಯಿ. ಇನ್ನು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ವಿನೀತ್ ಎಸ್ ಜೈನ್ 2024-25ರ ವಾರ್ಷಿಕ ಸ್ಯಾಲರಿ 11.23 ಕೋಟಿ ರೂಪಾಯಿ. ಇದು ಕೂಡ ಮಾಲೀಕ ಗೌತಮ್ ಅದಾನಿ ಸ್ಯಾಲರಿಗಿಂತ ಹೆಚ್ಚು. ಇನ್ನು ಅದಾನಿ ಗ್ರೂಪ್ ಸಿಎಫ್ಒ ಜುಗೆಶಿಂದರ್ ಸಿಂಗ್ ವಾರ್ಷಿಕ ಸ್ಯಾಲರಿ 10.4 ಕೋಟಿ ರೂಪಾಯಿ. ಜುಗೇಶಿಂದರ್ ಸಿಂಗ್, ತಮ್ಮ ಮಾಲೀಕ ಗೌತಮ್ ಅದಾನಿಯಷ್ಟೇ ಸ್ಯಾಲರಿ ಪಡೆದಿದ್ದಾರೆ.

ಗೌತಮ್ ಅದಾನಿ ಪುತ್ರನ ವೇತನ

ಗೌತಮ್ ಅದಾನಿ ಪುತ್ರ ಕರಣ್ ಅದಾನಿ ವಾರ್ಷಿಕ ವೇತನ 7.09 ಕೋಟಿ ರೂಪಾಯಿ. ಇನ್ನು ಗೌತಮ್ ಅದಾನಿ ಕಿರಿಯ ಸಹೋದರ ರಾಜೇಶ್ ಅದಾನಿ ವಾರ್ಷಿಕ ವೇತನ 9.87 ಕೋಟಿ ರೂಪಾಯಿ. ಗೌತಮ್ ಅದಾನಿ ಸಂಬಂಧಿ ಹಾಗೂ ಆಫ್ತ ಸಾಗರ್ ಅದಾನಿ ವಾರ್ಷಿಕ ಸ್ಯಾಲರಿ 7.50 ಕೋಟಿ ರೂಪಾಯಿ.