ಎಂಬಿಬಿಎಸ್ ಪದವಿ ಪಡೆದಿದ್ದ ವ್ಯಕ್ತಿಯೊಬ್ಬ ಹೃದಯತಜ್ಞನಲ್ಲದಿದ್ದರೂ 50ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಪೊಲೀಸರ ಅತಿಥಿಯಾಗಿದ್ದಾನೆ. 

ನವದೆಹಲಿ: ಆತ ಎಂಬಿಬಿಎಸ್ ಮಾಡಿದ ವೈದ್ಯನೇ ಆದರೆ ಹೃದಯತಜ್ಞ ಆಗಿರಲಿಲ್ಲ, ಆತನಿಗೆ ಹೃದಯತಜ್ಞನಾಗುವ ಆಸೆ ಇತ್ತೋ ಏನೋ ಗೊತ್ತಿಲ್ಲ, ಆದರೆ ಆತ 50ಕ್ಕೂ ಹೆಚ್ಚು ಜನರಿಗೆ ಹೃದಯಶಸ್ತ್ರಚಿಕಿತ್ಸೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆತ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಯಾರೊಬ್ಬರೂ ಸತ್ತಿಲ್ಲ ಆದರೆ ಹೃದಯಶಸ್ತ್ರಚಿಕಿತ್ಸೆಯ ಎ ಟು ಝೆಡ್ ತಿಳಿಯದೇ 50ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ನಡೆಸಿ ಅವರ ಜೀವವನ್ನು ಆಪತ್ತಿನಲ್ಲಿಟ್ಟ ಕಾರಣಕ್ಕೆ ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಹರ್ಯಾಣದ ಫರಿದಾಬಾದ್‌ನಲ್ಲಿ.

ಪಂಕಜ್ ಮೋಹನ್ ಶರ್ಮಾ ಎಂಬುವವರೇ ಹೀಗೆ 50ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿ ರೋಗಿಗಳ ಹೃದಯವನ್ನು ತೂಗುಕತ್ತಿಯಲ್ಲಿಟ್ಟವರು. ಫರಿದಾಬಾದ್‌ನ ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಪಂಕಜ್ ಮೋಹನ್ ಶರ್ಮಾ ಅರ್ಹ ವೈದ್ಯರು ಹೌದು ಆದರೆ ಅವರು ಹೃದಯದ ವಿಶೇಷತಜ್ಞ ಅಲ್ಲ, ಅವರಿಗೆ ಹೃದಯಶಸ್ತ್ರಚಿಕಿತ್ಸೆ ನಡೆಸುವ ಅಧಿಕಾರವೂ ಇರಲಿಲ್ಲ. ಪಂಕಜ್ ಶರ್ಮಾ 8 ತಿಂಗಳಲ್ಲಿ 50ಕ್ಕೂ ಹೆಚ್ಚು ಈ ರೀತಿಯ ಹೃದಯ ಚಿಕಿತ್ಸೆ ಮಾಡಿದ್ದಾರೆ.

ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ಎಂಬುವವರು ಎನ್ಐಟಿ ಫರಿದಾಬಾದ್‌ನ ಪೊಲೀಸ್ ಠಾಣೆಯಲ್ಲಿ ಈ ಪಂಕಜ್ ವಿರುದ್ಧ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ನಂತರ ಪಂಕಜ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಅವರು ನಕಲಿ ದಾಖಲೆ ಬಳಸಿ ಹೆಚ್ಚುವರಿ ಪದವಿ ಪಡೆದಿರುವುದು ಗೊತ್ತಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಪಂಕಜ್ ಅವರು, ನಗರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಕಾನೂನುಬದ್ಧ ಹೃದ್ರೋಗ ತಜ್ಞ ಡಾ. ಪಂಕಜ್ ಮೋಹನ್ ಅವರಿಗೆ ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಣಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ಈ ಎಡವಟ್ಟು ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಬಾದ್‌ಶಾ ಖಾನ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೃದಯ ಚಿಕಿತ್ಸಾ ಕೇಂದ್ರವನ್ನು ನಡೆಸುತ್ತಿರುವ ಮೆಡಿಟೆರಿನಾ ಆಸ್ಪತ್ರೆಯಿಂದ ಈ ಪಂಕಜ್ ಮೋಹನ್ ಶರ್ಮಾ ಅವರನ್ನು ಕಳೆದ ವರ್ಷ ಜುಲೈನಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಈ ಡಾ. ಶರ್ಮಾ ಡಾ. ಮೋಹನ್ ಅವರ ನೋಂದಣಿ ಸಂಖ್ಯೆ 2456 ಅನ್ನು ಬಳಸಿಕೊಂಡಿದ್ದರು. ಆದರೆ ಡಾ ಶರ್ಮಾ ಅವರ ಸ್ವಂತ ಎಂಬಿಬಿಎಸ್ ನೋಂದಣಿ ಸಂಖ್ಯೆ 28482 ಆಗಿತ್ತು. ಅಷ್ಟಕ್ಕೆ ಸುಮ್ಮನಿರದ ಡಾ. ಶರ್ಮಾ, ತಮ್ಮ ಪ್ರಿಸ್ಕ್ರಿಪ್ಪನ್‌ಗಳಲ್ಲಿ ತಮ್ಮನ್ನು ಹೃದಯಶಾಸ್ತ್ರಜ್ಞ ಎಂದು ಗುರುತಿಸುವ ಚಿಹ್ನೆಯನ್ನು ಹಾಕಿಕೊಂಡಿದ್ದರು. ಅದರ ಪ್ರಕಾರ ಅವರು ಅವರು ಹೃದಯಶಾಸ್ತ್ರದಲ್ಲಿ ಡಿಎನ್‌ಬಿ ಮುಗಿಸಿದ್ದರು. ಅಂದರೆ ಇದು ಎಂಡಿಗೆ ಸಮಾನವಾದ ಸ್ನಾತಕೋತ್ತರ ಪದವಿ.

ವಂಚನೆಯ ಬಗ್ಗೆ ತಿಳಿದ ನಂತರ, ನಿಜವಾದ ಹೃದಯತಜ್ಞ ಡಾ. ಪಂಕಜ್ ಮೋಹನ್ ಈ ವರ್ಷದ ಜನವರಿಯಲ್ಲಿ ಭಾರತೀಯ ವೈದ್ಯಕೀಯ ಸಂಘಕ್ಕೆ ದೂರು ಸಲ್ಲಿಸಿದರು, ಇತರ ವೈದ್ಯರು ತಮ್ಮ ಅರ್ಹತೆಗಳನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಅವರು ಡಾ. ಶರ್ಮಾ ವಿರುದ್ಧ ಕಾನೂನು ನೋಟಿಸ್ ಕೂಡ ಜಾರಿ ಮಾಡಿದರು.

ಹೀಗಾಗಿ ಫೆಬ್ರವರಿಯಲ್ಲಿ ನಕಲಿ ಹೃದಯತಜ್ಞ ಡಾ. ಶರ್ಮಾ ಅವರಿಗೆ ವೈದ್ಯಕೀಯ ಪದವಿಯನ್ನು ತೋರಿಸಲು ಕೇಳಲಾಯ್ತು. ಇದಾದ ನಂತರ ಅವರು ಇದ್ದಕ್ಕಿದ್ದಂತೆ ಹೃದಯ ಕೇಂದ್ರಕ್ಕೆ ಹೋಗುವುದನ್ನು ನಿಲ್ಲಿಸಿದರು ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿಯಾಗಿದೆ. ಈ ಮಧ್ಯೆ ಅನೇಕ ರೋಗಿಗಳು ಅವರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ರೋಗಿಗಳು ನಿಜವಾದ ಡಾ. ಪಂಕಜ್ ಮೋಹನ್ ಅವರನ್ನು ಭೇಟಿ ಮಾಡಿದರು. ಆದರೆ ಈ ನಿಜವಾದ ಡಾ. ಪಂಕಜ್ ಮೋಹನ್ ಅವರು ಹೃದಯ ಕೇಂದ್ರದಲ್ಲಿ ಎಂದಿಗೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದಾಗ, ಈ ಆರೋಪಗಳು ಬಲಗೊಂಡವು ಎಂದು ಬಾದ್‌ಶಾ ಖಾನ್‌ನ ವೈದ್ಯರು ಹೇಳಿದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾದ್‌ಶಾ ಖಾನ್‌ನಲ್ಲಿರುವ ಹೃದಯ ಕೇಂದ್ರದ ಮುಖ್ಯಸ್ಥರೂ ಆಗಿರುವ ಮೆಡಿಟೆರಿನಾ ಆಸ್ಪತ್ರೆಯ ಸಿಎಂಡಿ ಡಾ. ಎಂ. ಪ್ರತಾಪ್ ಕುಮಾರ್, ನಕಲಿ ಡಾ. ಶರ್ಮಾ ಅವರನ್ನು ತೆಗೆದುಹಾಕಲಾಗಿದೆ ಎಂದು ದೃಢಪಡಿಸಿದರು. ಅವರು ಸಾಮಾನ್ಯ ವೈದ್ಯರಾಗಿ ಅರ್ಜಿ ಸಲ್ಲಿಸಿದರು. ಅವರ ಡಿಎಂ (ಹೃದಯಶಾಸ್ತ್ರ) ಪದವಿಯ ಬಗ್ಗೆ ನಮಗೆ ಅನುಮಾನವಿತ್ತು ಮತ್ತು ಅದರ ಮೇಲೆ ಈಗ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.