ನಾಯಿ ಪ್ರೀತಿ ಪ್ರಾಮಾಣಿಕವಾಗಿರುತ್ತದೆ. ಮಾಲೀಕನನ್ನು ಅತಿಯಾಗಿ ಪ್ರೀತಿಸುವ ನಾಯಿಗಳು ಆತ ಮನೆಯಿಂದ ಹೊರಗೆ ಹೋದ್ರೆ ಅವನ ಹಿಂದೆ ಬರುತ್ವೆ. ಸೋಶಿಯಲ್ ಮೀಡಿಯಾದಲ್ಲಿ ಈಗ ವಿಡಿಯೋ ಒಂದು ವೈರಲ್ ಆಗಿದ್ದು, ಮಾಲೀಕನ ಕೆಲ್ಸ ನೋಡಿ ಜನ ನಗ್ತಿದ್ದಾರೆ.

ಚಿಕ್ಕ ಮಕ್ಕಳು ಮನೆಯಲ್ಲಿದ್ರೆ ಅವರನ್ನು ಬಿಟ್ಟು ಹೊರಗೆ ಹೋಗೋದು ಕಷ್ಟದ ಕೆಲ್ಸ. ಯಾರಾದ್ರೂ ಮನೆಯಿಂದ ಹೊರಗೆ ಹೋಗ್ತಿದ್ದಾರೆ ಎನ್ನುವ ಸುಳಿವು ಮಕ್ಕಳಿಗೆ ಸಿಕ್ಕಿದ್ರು ಅವರ ಹಿಂದೆ ಓಡ್ತಾರೆ. ನಾ ಬರ್ತೇನೆ ಅಂತ ಗಂಟು ಬೀಳ್ತಾರೆ. ಅವರ ಕಣ್ತಪ್ಪಿಸಿ ಹೋಗೋದು ದೊಡ್ಡ ಸಾಹಸ. ಚಪ್ಪಲಿ ಹಾಕಿಕೊಂಡು ಬಾ, ಡ್ರೆಸ್ ಬದಲಿಸಿಕೊಂಡು ಬಾ ಅಂತ ಸುಳ್ಳು ಹೇಳಿ, ಕದ್ದುಮುಚ್ಚಿ ಮನೆಯಿಂದ ಹೊರ ಹೋಗ್ಬೇಕಾಗುತ್ತೆ. ಮನೆಯಲ್ಲಿರುವ ಮಕ್ಕಳಂತೆ ಪ್ರಾಮಾಣಿಕತೆಗೆ ಹೆಸರಾಗಿರುವ ನಾಯಿ ಕೂಡ. ಮಕ್ಕಳಷ್ಟೇ ಮುಗ್ಧವಾಗಿರುವ ಈ ಮೂಕ ಪ್ರಾಣಿ, ಮಾಲೀಕನಿಗೆ ಆತ ನೀಡಿದ ಪ್ರೀತಿ (Love)ಯ ಡಬಲ್ ಪ್ರೀತಿಯನ್ನು ಧಾರೆ ಎರೆಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ನಾಯಿ ಪ್ರೀತಿಯ ಅನೇಕ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ವೆ. ಈಗ ಮತ್ತೊಂದು ವಿಡಿಯೋ ಬಳಕೆದಾರರ ಮೆಚ್ಚುಗೆ ಗಳಿಸಿದೆ. ಈ ವಿಡಿಯೋದಲ್ಲಿ ಮನೆ ಮಾಲೀಕ, ಮನೆಯಿಂದ ಹೊರಗೆ ಹೋಗಲು ಹರಸಾಹಸ ಮಾಡಿದ್ದಾನೆ. ಕಳ್ಳನಂತೆ ಮನೆ ಗೇಟ್ ಹಾರಿದ್ದಾನೆ.

Quickheadlineindia ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮನೆ ಬಿಡೋದು ಇಷ್ಟೊಂದು ಕಷ್ಟವಾಗಬಾರದು ಅಂತ ಶೀರ್ಷಿಕೆ ಹಾಕಲಾಗಿದೆ. ನಾಯಿ ಪ್ರೀತಿ (dog love )ಯಿಂದ ತಪ್ಪಿಸಿಕೊಂಡು, ಮನೆಯಿಂದ ಹೊರಗೆ ಹೋಗಲು ಮನೆ ಮಾಲೀಕ ಕಷ್ಟಪಡ್ತಿರೋದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು. ಮನೆ ಮಾಲೀಕ ಹೊರಗೆ ಹೋಗ್ತಾನೆ ಅನ್ನೋದು ನಾಯಿಗೆ ಗೊತ್ತಾಗಿದೆ. ಹಾಗಾಗಿ ಮಾಲೀಕನಿಗೆ ಗೇಟ್ ನಿಂದ ಹೊರ ಹೋಗೋಕೆ ನಾಯಿ ಬಿಡ್ತಿಲ್ಲ. ಗೇಟ್ ಹೊರಗೆ ಹೋದ್ರೆ ಅದೂ ಹೊರಗೆ ಬರ್ತಿದೆ. ಒಳಗೆ ಹೋದ್ರೆ ಅದೂ ಹೊರಗೆ ಬರ್ತಿದೆ. ಆತನ ಕಾಲಿನೊಳಗೆ ನುಸುಳಿ, ಫಟ್ ಅಂತ ಬರುವ ನಾಯಿಯಿಂದ ತಪ್ಪಿಸಿಕೊಳ್ಳೋದು ಆತನಿಗೆ ಕಷ್ಟವಾಗಿದೆ. ಗೇಟ್ ಹಾಕಿ ಹೊರಗೆ ಹೋಗಲು ಸಾಧ್ಯವಾಗದ ವ್ಯಕ್ತಿ, ಕೊನೆಯಲ್ಲಿ ಒಂದು ಉಪಾಯ ಮಾಡ್ತಾನೆ. ಗೇಟ್ ಹತ್ತಿ, ಕಳ್ಳರಂತೆ ಜಂಪ್ ಮಾಡಿ, ಮನೆಯಿಂದ ಹೊರಗೆ ಹೋಗ್ತಿರೋದನ್ನು ನೀವು ಕಾಣ್ಬಹುದು.

ಈ ವಿಡಿಯೋವನ್ನು ಬಳಕೆದಾರರು ಇಷ್ಟಪಟ್ಟಿದ್ದಾರೆ. ನಾಯಿಯನ್ನು ಪ್ರೀತಿಸುವ ವ್ಯಕ್ತಿಗಳಿಗೆ ಮಾತ್ರ ಈ ವಿಡಿಯೋ ಅರ್ಥವಾಗುತ್ತೆ ಅಂತ ಕಮೆಂಟ್ ಮಾಡಿದ್ದಾರೆ. ಇಷ್ಟೆಲ್ಲ ಪ್ರೀತಿ ನೀಡುವ ನಾಯಿಗಾದ್ರೂ ನೀವು ಸುರಕ್ಷಿತವಾಗಿ ಮನೆಗೆ ವಾಪಸ್ ಬರ್ಬೇಕು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೊರಗೆ ಹೋದ ಮಾಲೀಕ ಮನೆಗೆ ವಾಪಸ್ ಬರುವವರೆಗೆ ನಾಯಿ ಮನೆ ಬಾಗಿಲಿನಲ್ಲಿ ಕಾಯ್ತಾ ಇರುತ್ತದೆ. ಇವು ಸಾವನ್ನಪ್ಪಿದಾಗ ಆಗುವ ನೋವು ಅಷ್ಟಿಷ್ಟಲ್ಲ ಎಂದು ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅನೇಕ ಬಾರಿ, ನೀವು ಹೋಗೋದನ್ನು ನಾಯಿ ತಡೆಯುತ್ತಿದ್ರೆ ಅದು ಅಪಾಯದ ಮುನ್ಸೂಚನೆಯೂ ಆಗಿರಬಹುದು. ಎಚ್ಚರದಿಂದ ಇರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಮ್ಮ ಮನೆಯಲ್ಲೂ ನಾಯಿ ಇದೇ ರೀತಿ ಪ್ರೀತಿ ಮಾಡುತ್ತೆ, ಮನೆಯಿಂದ ಕದ್ದುಮುಚ್ಚಿ ಹೊರಗೆ ಹೋಗ್ಬೇಕು ಎಂದು ಅನೇಕರು ಇಲ್ಲಿ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ನಾಯಿ ಹಾಗೂ ಬೆಕ್ಕಿನ ಹೋಲಿಕೆ ಕೂಡ ನಡೆದಿದೆ. ಬೆಕ್ಕು ಕೂಡ ಹೀಗೆ ಮಾಡುತ್ತಾ ಎನ್ನುವ ಪ್ರಶ್ನೆಗೆ ಬಹುತೇಕರು ಇಲ್ಲ ಎನ್ನುವ ಉತ್ತರ ನೀಡಿದ್ದಾರೆ. ಬೆಕ್ಕು ಸ್ವಾರ್ಥಿ, ಅದು ಆಹಾರ ತಿಂದು ಮಲಗುತ್ತೇ ವಿನಃ ನಾಯಿಯಂತೆ ಇಷ್ಟೊಂದು ಪ್ರೀತಿ ತೋರಿಸೋದಿಲ್ಲ ಎಂದಿದ್ದಾರೆ. ಏನೇ ಇರಲಿ, ಈ ವಿಡಿಯೋ ಪ್ರಾಣಿ ಪ್ರಿಯರ ಮುಖದಲ್ಲಿ ನಗು ಮೂಡಿಸಿದ್ದು ಸುಳ್ಳಲ್ಲ.

 

 

View post on Instagram