50ರ ಹರೆಯದ ಮಹಿಳೆಯೊಬ್ಬರ ಒಂಟಿತನ, ಅವರ ಭಾವನೆಗಳು ಮತ್ತು ಬಯಕೆಗಳನ್ನು ಈ ಚಿತ್ರ ಸುಂದರವಾಗಿ ಚಿತ್ರಿಸುತ್ತದೆ. ಕಲ್ಕತ್ತ ನಗರದ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯು ಮಾನವ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಚಿತ್ರ: ಯುವರ್ಸ್ ಟ್ರೂಲಿ
ಒಟಿಟಿ: ಝೀ5
ನಿರ್ದೇಶನ: ಸಂಜಯ್ ನಾಗ್
ತಾರಾಗಣ: ಸೋನಿ ರಜಧಾನ್, ಪಂಕಜ್ ತ್ರಿಪಾಟಿ, ಅಹನಾ ಕುಮ್ರಾ.
ಬಿಡುಗಡೆಗೊಂಡ ವರ್ಷ: 2018
ಒಂಟಿಯಾಗಿರುವವರಲ್ಲಿ 55-56 ವಯಸ್ಸಾದಾಗ ಏಕಾಂಗಿತನ ಹೇಗೆ ಕಾಡುತ್ತದೆ ಅವರ ಮನಸ್ಸು ಸಂಗಾತಿಯನ್ನು ಅಥವಾ ಒಂದು ಸಾಹಚರ್ಯವನ್ನು ಎಷ್ಟು ಬಯಸುತ್ತದೆ ಎಂಬ ಕಥಾವಸ್ತು ಇರುವ ಈ ಚಿತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಸೋನಿ ರಜಧಾನ್ (ನಟಿ ಆಲಿಯಾ ಭಟ್ ಅವರ ತಾಯಿ) ಇವರು 80 ರ ದಶಕದಲ್ಲಿ ದೂರದರ್ಶನದಲ್ಲಿ ಬಂದ ಪ್ರಸಿದ್ಧ ಧಾರವಾಹಿ ಬುನಿಯಾದ್ ನಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದವರು. ಬ್ರಿಟಿಷ್ ಮೂಲದ ಸೋನಿ ತಮ್ಮ ಚೆಲುವು ಮತ್ತು ಖಡಕ್ ಅಭಿನಯದಿಂದ ಹೆಸರಾದವರು. ಇವರು ನಟಿಸಿದ್ದು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ. ಆದರೆ ಯುವರ್ಸ್ ಟ್ರೂಲಿ ಯಲ್ಲಿ ಇವರೇ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಭಾವನಾತ್ಮಕ ಪಾತ್ರದಲ್ಲಿ ಸೋನಿ ಗೆದ್ದಿದ್ದಾರೆ.
ಮೀಠಿ ಕುಮಾರ್ 56/58 ರ ಹರೆಯದ ಮಹಿಳೆ. ಸರ್ಕಾರದ ಸ್ವಾಮ್ಯದ ಕಚೇರಿಯಲ್ಲಿ ನೌಕರಿ ಮಾಡುತ್ತಿರುತ್ತಾಳೆ. ಒಂಟಿಯಾಗಿರುವ ಮೀಠಿ ಕಲ್ಕತ್ತೆಯ ಮಹಾನಗರದಲ್ಲಿ ವಾಸವಾಗಿರುತ್ತಾಳೆ. ಕಚೇರಿಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಒಂದು ಕೈಗಾಡಿಯಲ್ಲಿ ಹೋಗುತ್ತಾಳೆ. ಹಳೆಯ ಮನೆ ತನ್ನ ತಂದೆ ಕಟ್ಟಿಸಿದ್ದು ಎಂಬ ಮಮಕಾರ. ಯಾವುದೋ ಕಾರಣಕ್ಕೆ ಮದುವೆಯಾಗಲು ಬಿಡದ ತಂದೆಯಿಂದ ಅವಿವಾಹಿತಳಾಗೇ ಉಳಿದಿರುತ್ತಾಳೆ. ಇದರ ಬಗ್ಗೆ ಅವಳಿಗೇನೂ ಬೇಸರವಿಲ್ಲ. ತನ್ನವರು ಎಂದು ಇರುವುದು ಒಬ್ಬಳೇ ತಂಗಿ, ಅವಳೂ ದೂರದೂರಿನಲ್ಲಿ ವಾಸ. ಈಗಿನ ಕಾಲದ ತಂಗಿ ಲಾಲಿ ಹಳೆಯ ಕಾಲದ ಅಕ್ಕ ಮೀಠಿಯ ನಡುವೆ ಅಜಗಜಾಂತರ ವ್ಯತ್ಯಾಸ ಆದರೂ ಪ್ರೀತಿ ಮಮತೆಗೇನೂ ಕೊರತೆ ಇಲ್ಲ. ಈ ಮನೆ ಮಾರಿ ಬೆಂಗಳೂರಿಗೆ ಬಂದು ಬಿಡು ಎಂದು ತಂಗಿ ಹೇಳುತ್ತಲೇ ಇರುತ್ತಾಳೆ, ಆದರೆ ಮೀಠಿಗೆ ಆ ಮನೆ ತಂದೆ ಕಟ್ಟಿಸಿದ್ದು ಎಂಬ ವಾಂಛಲ್ಯದಿAದ ಮಾರಲು ಇಷ್ಟ ಪಡುವುದಿಲ್ಲ.
ಆ ಮನೆಯ ಒಂದು ಪಾರ್ಶ್ವ ವಿಜಯ್ ಎಂಬ ಒಬ್ಬ ಸಂಸಾರಸ್ಥನಿಗೆ ಬಾಡಿಗೆಗೆ ಕೊಟ್ಟಿರುತ್ತಾಳೆ. ವಿಜಯ್ ತನ್ನ ಹೆಂಡತಿ ಮಗಳೊಡನೆ ಅಲ್ಲಿ ಇರುತ್ತಾನೆ, ವಿಜಯ್ ರಂಗೂನ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಪ್ರತಿದಿನ ಮೇಲಿನ ಮನೆಯಲ್ಲಿ ವಾಸಿಸುವ ವಿಜಯ್ ತನ್ನ ಹೆಂಡತಿಯೊಡನೆ ಸರಸದ ಕ್ಷಣಗಳನ್ನು ಕಳೆಯುವಾಗ ಅವರಿಬ್ಬರ ಪಿಸುಮಾತು, ನಗು ಏದುಸಿರಿನ ಶಬ್ದ ಇವೆಲ್ಲವನ್ನೂ ಕೇಳುವ ಮೀಠಿಗೆ ಕಿರಿಕಿರಿ. ಆದರೆ ಏನೂ ಮಾಡುವ ಹಾಗಿಲ್ಲ. ಒಮ್ಮೊಮ್ಮೆ ಅವಳಿಗೆ ತನಗೂ ಹೀಗೆ ಒಬ್ಬ ಸಂಗಾತಿ ಇರಬಾರದೇ ಎನಿಸುತ್ತದೆ. ಕಾಣದ ಸಂಗಾತಿಯನ್ನು ಕಲ್ಪಿಸಿಕೊಂಡು ಅವನ ಮೇಲೆ ಕೈಹಾಕಿ ಮಲಗಿದಂತೆ ಕನಸು ಕಾಣುತ್ತಾಳೆ.
ಮೀಠಿ ಪ್ರತಿದಿನ ಕಚೇರಿಗೆ ಹೋಗುವಾಗ ಹೌರಾ ರೈಲ್ವೇ ನಿಲ್ದಾಣದಿಂದಲೇ ಸಾಗಬೇಕು. ಅಲ್ಲಿ ರೈಲ್ವೆ ಅನೌನ್ಸರ್ ಒಬ್ಬನ ಧ್ವನಿಗೆ ಮರುಳಾಗುತ್ತಾಳೆ. ಅವನು ಯಾರು ಏನು ಎಂದು ತಿಳಿದಿರುವುದಿಲ್ಲ. ಆವನು ಹೇಗಿದ್ದಾನೆಂದೂ ಗೊತ್ತಿಲ್ಲ, ಆದರೆ ಅವನ ಗಡಸು ಧ್ವನಿ ಮಾತ್ರ ಅವಳಿಗೆ ಇಷ್ಟವಾಗಿಬಿಡುತ್ತದೆ. ಪ್ರತಿದಿನ ಆ ಧ್ವನಿಯೊಂದಿಗೆ ಮಾತನಾಡಿದಂತೆ ಕಲ್ಪಿಸಿಕೊಳ್ಳುತ್ತಾಳೆ. ಆ ಧ್ವನಿಗೆ ಪ್ರತಿದಿನ ಪತ್ರಗಳನ್ನು ಬರೆಯುತ್ತಾಳೆ. ತನ್ನ ಭಾವನೆಗಳನ್ನು ತೋಡಿಕೊಳ್ಳುತ್ತಾಳೆ. ಆ ಧ್ವನಿಯ ಒಡೆಯನಿಂದಲೂ ಪತ್ರಗಳನ್ನು ನಿರೀಕ್ಷೆ ಮಾಡುತ್ತಾಳೆ ಇದೊಂದೇ ಅವಳ ಏಕತಾನತೆಯ ಜೀವನದಲ್ಲಿ ಚಿಮ್ಮುವ ಉಲ್ಲಾಸದ ಕಾರಂಜಿ. ಆದರೆ ಒಂದು ದಿನವೂ ಅವನಿಂದ ಪತ್ರ ಬರುವುದಿಲ್ಲ. ಅವಳ ದೃಷ್ಟಿಯಲ್ಲಿ ಆ ಧ್ವನಿಯ ಒಡೆಯ ಒಬ್ಬ ಕರುಣಾಳು ಪ್ರೇಮಮಯಿ. ಅವನ ಧ್ವನಿಗೆ ಅವಳು ಎಷ್ಟು ವ್ಯಸನಿಯಾಗಿರುತ್ತಾಳೆ ಎಂದರೆ ಆ ಧ್ವನಿಯ ಜೊತೆ ಅವಳು ನಿತ್ಯ ಸಂಭಾಷಿಸುತ್ತಲೇ ಇರುತ್ತಾಳೆ.
ಇದನ್ನೂ ಓದಿ: ಬ್ಯಾಂಕ್ ಈ ನೇರ ವಂಚನೆ ನಿಮ್ಮ ಗಮನಕ್ಕೆ ಬಂದಿದ್ಯಾ: ಹಿಸಾಬ್ ಬರಾಬರ್ ನೋಡಿ ಗೊತ್ತಾಗುತ್ತೆ
ತಾನು ಚೆಂದದ ಸೀರೆ ಉಟ್ಟರೆ ಆ ಧ್ವನಿ ಅವಳನ್ನು ಹೊಗಳಿದಂತೆ, ಕಚೇರಿಗೆ ತಡವಾದರೆ ಆ ಧ್ವನಿ ಅವಳನ್ನು ಎಚ್ಚರಿಸಿದಂತೆ ಅವಳಿಗೆ ಫೀಲ್ ಆಗುತ್ತ ಇರುತ್ತದೆ. ಅವಳ ಅಂತರಾತ್ಮದ ದನಿಯಂತೆ ಆ ಅನೌನ್ಸರ್ನ ಧ್ವನಿ ಅವಳ ಸಂಗಡವೇ ಇರುತ್ತದೆ. ಅವಳಿಗೆ ಮಾರ್ಗದರ್ಶನ ಮಾಡುತ್ತಿರುತ್ತದೆ. ಭಯವಾದಾಗ ಧೈರ್ಯ ಹೇಳುತ್ತದೆ. ಮನಸ್ಸು ಗಲಿಬಿಲಿಗೊಂಡಾಗ ಸಾಂತ್ವನ ಹೇಳುತ್ತದೆ. ಅವಳ ಪತ್ರಗಳಿಗೆ ಮಾರುತ್ತರ ಬರದಿದ್ದರೂ ತಾನು ಪತ್ರ ಬರೆಯುವುದನ್ನು ನಿಲ್ಲಿಸುವುದಿಲ್ಲ. ಮೀಠಿ ಆ ಧ್ವನಿಯನ್ನು ತನ್ನ ಮನಸಿನಲ್ಲಿ ಎಂದೆದೂ ತಾಜಾವಾಗಿಯೇ ಇಟ್ಟುಕೊಳ್ಳಲು ಬಯಸುತ್ತಾಳೆ.
ಅವಳ ಹಳೆಯ ಮನೆಯಲ್ಲಿ ಒಂದು ಟೀವಿಯೂ ಇರುವುದಿಲ್ಲ ಓದಲು ಪುಸ್ತಕಗಳೂ ಇರುವುದಿಲ್ಲ. ಕಚೇರಿಯಿಂದ ಮನೆಗೆ ಬಂದರೆ ಗವ್ವೆಂದು ಮುತ್ತುವ ಏಕಾಂಗಿತನವನ್ನು ಹೋಗಲಾಡಿಸಲು ಅವಳು ಆಯ್ದುಕೊಂಡಿರುವ ದಾರಿ ಈ ಧ್ವನಿಯೊಡನೆ ಸಂಭಾಷಿಸುವುದು. ಒಮ್ಮೆ ತನ್ನ ಪ್ರೀತಿ ಕಾಳಜಿಯನ್ನು ವ್ಯಕ್ತ ಪಡಿಸಲು ಯಾರಾದರೂ ಬೇಕೆಂದು ಒಂದು ನಾಯಿಮರಿಯನ್ನು ತಂದು ಸಾಕುತ್ತಾಳೆ. ಅದನ್ನು ಮುದ್ದಿಸುತ್ತಾಳೆ.
ಒಮ್ಮೆ ಆ ಅನೌನ್ಸರ್ ನನ್ನು ಹುಡುಕಿಕೊಂಡು ರೈಲ್ವೇ ಕಚೇರಿಗೆ ಹೋದಾಗ ಆದಿನ ಎಲ್ಲರೂ ಬೇಗ ಹೊರಟುಬಿಟ್ಟಿರುತ್ತಾರೆ. ಇವಳಿಗೆ ಯಾರೂ ಸಿಗುವುದಿಲ್ಲ. ಮತ್ತೆ ಆ ಧ್ವನಿ ಇವಳ ಹಿಂದೆ ಮುಂದೆ ಸುತ್ತುತ್ತದೆ. 'ನೀನು ನನ್ನ ಹುಡುಕಿ ಬಂದಿದ್ದೆಯAತೆ ನಾನು ಇರಲಿಲ್ಲ. ಸಧ್ಯದಲ್ಲೇ ನಮ್ಮ ಧ್ವನಿಯ ಬದಲಾಗಿ ಇಲ್ಲಿ ಕಂಪ್ಯೂಟರ್ ಧ್ವನಿ ಬಳಸುತ್ತಾರಂತೆ. ಏಕೋ ಇತ್ತೀಚೆಗೆ ಮನುಷ್ಯರ ದನಿಗಳು ಮಾಯವಾಗಿ ಆ ಜಾಗದಲ್ಲಿ ಯಂತ್ರಗಳು ಬಂದು ಸೇರಿಕೊಳ್ಳುತ್ತಿದೆ' ಎಂಬ ಆ ಧ್ವನಿಯ ಮಾತನ್ನು ಕೇಳಿದಾಗ ಈ ಜಗತ್ತನ್ನು ಆವರಿಸುತ್ತಿರುವ ಯಾಂತ್ರಿಕತೆಯ ಬಗ್ಗೆ ಯೋಚನೆಯಾಗುತ್ತದೆ. ಭಯವಾಗುತ್ತದೆ.
ಇದನ್ನೂ ಓದಿ: ಶೆಹನಾಜ್ ಪರವೀನ್ ಎಂಬ ಪಾಕಿಸ್ತಾನಿ ಮಹಿಳೆಯ ಸತ್ಯ ಕತೆಯನ್ನು ಆಧರಿಸಿದ ಚಿತ್ರವೇ ಕಾಫಿರ್
ಮೀಠಿಯ ತಂಗಿ ಲಾಲಿ ಬರುವುದು ಅವಳ ಉತ್ಸಾಹಭರಿತ ನಡವಳಿಕೆ. ಅವಳ ಬಾಯ್ ಫ್ರೆಂಡ್ ಅವನೊಡನೆ ಜಗಳ ಮುನಿಸು ಅಕ್ಕನೊಂದಿಗೆ ಪ್ರೀತಿ. ಲಾಲಿಯ ಜೊತೆಗಿನ ಕೆಲವು ಕಾಲವಾದರೂ ಮೀಠಿಗೆ ಖುಷಿಯ ಕ್ಷಣಗಳು. ಲಾಲಿಯ ಜೊತೆ ಆಚರಿಸುವ ದೀಪಾವಳಿ ಹಬ್ಬ, ದೀಪಗಳ ನಡುವೆ ನಿಂತು ಪೋಟೋ ತೆಗೆಸಿಕೊಳ್ಳುವುದು ಮೀಟಿಯ ಪಾಲಿನ ಸ್ಮರಣೀಯ ಘಳಿಗೆಗಳು. ದಿನಗಳು ಹಾಗೆಯೇ ಕಳೆದುಹೋಗುತ್ತಿರುತ್ತದೆ. ದುರ್ಗಾ ಪೂಜೆ, ದೀಪಾವಳಿ ಕ್ರಿಸ ಮಸ್ ಹೀಗೇಜೀವನ ಚಲಿಸುತ್ತಲೇ ಇರುತ್ತದೆ.